ಬ್ರ್ಯಾಡ್ಲೇ, ಜೇಮ್ಸ್ 
1693-1762. ಇಂಗ್ಲಿಷ್ ಖಗೋಳವಿಜ್ಞಾನಿ. ಜನನ: ಶರ್ಬೋರ್ನ್ ಗ್ಲೋಸೆಸ್ಟರ್‍ಶರ್, ಮಾರ್ಚ್ 1693; ಮರಣ: ಚಲ್ಫೋರ್ಡ್, ಗ್ಲೋಸೆಸ್ಟರ್‍ಶರ್, 13 ಜುಲೈ 1762. ಸೂರ್ಯನ ಸುತ್ತ ಗ್ರ್ರಹಗಳು ಪರಿಭ್ರಮಿಸುತ್ತವೆ ಎಂಬ ಪರಿಕಲ್ಪನೆಯನ್ನು ಪೋಲೆಂಡಿನ ಖಗೋಳ ವಿಜ್ಞಾನಿ ನಿಕೊಲಾಸ್ ಕೊಪರ್ನಿಕಸ್ (1473-1543) ಮಂಡಿಸಿದ ಇದು ಸೂರ್ಯಕೇಂದ್ರವಾದ. ಗ್ರಹಗಳ ಚಲನ ನಿಯಮಗಳನ್ನು ಜರ್ಮನಿಯ ಗಣಿತವಿದ ಹಾಗೂ ಖಗೋಳ ವಿಜ್ಞಾನಿ ಯೋಹನ್ ಕೆಪ್ಲರ್ (1571-1630) ರುಜುವಾತಿಸಿದ. ಈ ನಿಯಮಾನುಸಾರ ಗ್ರಹಗಳ ಚಲಿಸುವುದರ ಕಾರಣವನ್ನು ಐಸಾಕ್ ನ್ಯೂಟನ್ (1642-1727) ವಿಶ್ವಗುರುತ್ವಾಕರ್ಷಣ ನಿಯಮಾನುಸಾರ ವಿವರಿಸಿದ. ಇವೆಲ್ಲವೂ ಸೈದ್ಧಾಂತಿಕ ನೆಲೆಯಲ್ಲಿ ಸರಿ. ಆದರೆ ವಾಸ್ತವವಾಗಿ ಭೂಮಿ ಸೂರ್ಯನ ಸುತ್ತಚಲಿಸುತ್ತಿದೆ. ಎನ್ನುವುದಕ್ಕೆ ಪ್ರತ್ಯಕ್ಷ ಪುರಾವೆ ಏನು?
ಭೂಮಿ ಸೂರ್ಯನ ಸುತ್ತ ಸಾಗುವುದು ನಿಜವೆಂದಾದ ಪಕ್ಷದಲ್ಲಿ ನಕ್ಷತ್ರ ಸ್ಥಾನಗಳು ಪಲ್ಲಟಗೊಳ್ಳುವುದು ಗೋಚರವಾಗಬೇಕು. ಅತಿದೂರದ ನಕ್ಷತ್ರಗಳನ್ನು ಕುರಿತಂತೆ ಇದು ಮಸಕಾಗಬಹುದಾದರೂ ಸಮೀಪದವನ್ನು ಕುರಿತಂತೆ ಸ್ಪಷ್ಟವಾಗಲೇಬೇಕು. ಆದರೆ ಕೊಪರ್ನಿಕಸನ ಕಾಲದಲ್ಲಿ ಇಂಥ ಯಾವ ವಿಚಲನೆಯೂ ಅಳತೆಗೆ ದೊರೆಯಲಿಲ್ಲ. ಸಮೀಪತಮ ನಕ್ಷತ್ರಗಳು ಕೂಡ ಭೂಚಲನೆಯ ಪರಿಣಾಮವಾಗಿ ಸ್ಥಾನಪಲ್ಲಟಗೊಳ್ಳದಷ್ಟು ದೂರದಲ್ಲಿರುವುದೇ ಇದರ ನಿಜಕಾರಣವೆಂದು ಆತ ಹೇಳಿದ.
ಬ್ರ್ಯಾಡ್ಲೇ ಕಾಲಕ್ಕಾಗಲೇ ವೀಕ್ಷಣೋಪಕರಣಗಳು ಸಾಕಷ್ಟು ಪರಿಷ್ಕøತವಾಗಿದ್ದುದರಿಂದಲೂ ಸ್ವತಃ ಈತನೇ ನಿಷ್ಕøಷ್ಟ ವೀಕ್ಷಣಪಟುವಾಗಿದ್ದುದರಿಂದಲೂ ನಕ್ಷತ್ರಗಳ ಸೂಕ್ಷ್ಮಸ್ಥಾನ ಪಲ್ಲಟವನ್ನು ಅಳೆಯುವುದು ಸಾಧ್ಯವಾಯಿತು. ಆದರೆ ಇದು ನಿರೀಕ್ಷಿತ ಮಾದರಿಯ ದಿಗಂತರ ವಿಸ್ಥಾಪನೆ (ವೀಕ್ಷಕನ ಸ್ಥಾನ ವ್ಯತ್ಯಾಸದಿಂದ ವೀಕ್ಷಿತ ವಸ್ತುವಿನ ಸ್ಥಾನಪಲ್ಲಟವಾದಂತೆ ಭಾಸವಾಗುವ ವಿದ್ಯಮಾನ- ಪ್ಯಾರಲ್ಯಾಕ್ಟಿಕ್ ಡಿಸ್‍ಪ್ಲೇಸ್‍ಮೆಂಟ್) ಆಗಿರಲಿಲ್ಲ. ಬದಲು ಪ್ರತಿಯೊಂದು ನಕ್ಷತ್ರವೂ ತನ್ನ ನಿಜನೆಲೆಯ ಸುತ್ತ ಅತ್ಯಲ್ಪ ಗಾತ್ರದ ದೀರ್ಘವೃತ್ತವನ್ನು ರೇಖಿಸುವಂಥ ಹೊಸಮಾದರಿಯ ಚಲನೆ ಆಗಿತ್ತು.
ಈ ವಿಚಿತ್ರ ವಿದ್ಯಮಾನದ ವಿವರಣೆ ಬ್ರ್ಯಾಡ್ಲೇಗೆ ಅತ್ಯಂತ ನಾಟಕೀಯ ಸನ್ನಿವೇಶದಲ್ಲಿ ಸ್ಫುರಿಸಿತು. (1728). ಆಗ ಅವನು ತೇಮ್ಸ್ ನದಿಯಲ್ಲಿ ದೋಣಿ ಸವಾರಿ ಮಾಡುತ್ತಿದ್ದ. ದೋೀಣಿಯ ಕೂವೆಮರಕ್ಕೆ ತಗಲಹಾಕಿದ್ದ ವಾಯು ದಿಕ್ಸೂಚಿಯ (ಗಾಳಿಕೋಳಿ) ವಿನ್ಯಾಸ, ಗಾಳಿಯ ದಿಶೆ ಬದಲಾಗದಿದ್ದರೂ ದೋಣಿಯ ವೇಗ ಬದಲಾಗದಂತೆ ಮೇಲೆ ಕೆಳಗೆ ತೊನೆಯುತ್ತಿದ್ದುದನ್ನು ಗಮನಿಸಿದ. ದಿಕ್ಸೂಚಿಯ ವಿನ್ಯಾಸ ಗಾಳಿಯ ಹಾಗೂ ದೋಣಿಯ ವೇಗಗಳ ಸಂಯುಕ್ತಫಲವೆಂದು ತರ್ಕಿಸಿದ. ಅಂದಮೇಲೆ ನಕ್ಷತ್ರದಿಂದ ಬರುವ ಬೆಳಕಿನ ವೇಗವೂ ಭೂಮಿಯ ಕಕ್ಷಾವೇಗವೂ ಸೇರಿ ನಕ್ಷತ್ರ ಗೋಚರ ಸ್ಥಾನ ಅದರ ನಿಜನೆಲೆಯ ಸುತ್ತ ದೀರ್ಘವೃತ್ತವನ್ನು ರೇಖಿಸುವುದು ಸಹಜವೆಂದು ತಿಳಿಯಿತು.

	ಭೂಮಿಯ ಕಕ್ಷಾವೇಗದ ಮತ್ತು ಬೆಳಕಿನ ವೇಗದ ಫಲವಾಗಿ ನಕ್ಷತ್ರದ ನಿಜನೆಲೆ ಪಲ್ಲಟಗೊಂಡತೆ ಭಾಸವಾಗುವ ಈ ವಿದ್ಯಮಾನಕ್ಕೆ ಬೆಳಕಿನ ವಿಪಥನ (ಅಬರೇಶನ್ ಆಫ್ ಲೈಟ್) ಎಂದು ಹೆಸರು. ಮಳೆಯ ಧಾರೆಗಳು ನೆಲಕ್ಕೆ ಲಂಬವಾಗಿ ಬೀಳುತ್ತಿರುವ ಸನ್ನಿವೇಶವನ್ನು ಊಹಿಸೋಣ. ಕೊಡೆ ಹಿಡಿದು. ನಡೆವಾತ ಅದನ್ನು ನಡಿಗೆ ದಿಶೆಯೆಡೆಗೆ ತುಸು ಬಾಗಿಸದಿದ್ದರೆ ಒದ್ದೆ ಆಗುವುದು ಖಾತಿ; ಸೈಕಲ್ ಸವಾರ ಕೊಡೆಯನ್ನು ಚಲನದಿಶೆಗೆ ಇನ್ನಷ್ಟು ಬಾಗಿಸಬೇಕಾಗುತ್ತದೆ; ಕಾರ್ ಪಯಣಿಗನಿಗಾದರೋ ಮಳೆಯಧಾರೆ ಹೆಚ್ಚು ಕಡಿಮೆ ಲಂಬವಾಗಿ ಎದುರಿಂದ ಬಡಿಯುವಂತೆ ಭಾಸವಾಗುತ್ತದೆ. ಇವೆಲ್ಲ ಪಯಣಿಗನ ವೇಗ ಮತ್ತು ಮಳೆಯವೇಗ ಸೇರಿ ಆಗುವ ಮಳೆಯಧಾರೆಯ ವಿಪಥನಕ್ಕೆ ನಿದರ್ಶನಗಳು.

	ವರ್ಷವಿಡೀ ದೂರದರ್ಶಕವನ್ನು ಒಂದೇ ನಕ್ಷತ್ರದೆಡೆಗೆ ಗುರಿ ಹಿಡಿದಿಡಬೇಕಾದರೆ ಆ ಉಪಕರಣವನ್ನು ಕಾಲದೊಂದಿಗೆ ತುಸುತುಸುವೇ ಸರಿಸುತ್ತಿರಬೇಕಾಗುತ್ತದೆ. ಹೀಗಲ್ಲದೇ ದೂರದರ್ಶಕವನ್ನು ಆರಂಭದ ವಿನ್ಯಾಸದಲ್ಲಿಯೇ ಸ್ಥಿರವಾಗಿಟ್ಟುದಾದರೆ ನಕ್ಷತ್ರ ಕ್ರಮೇಣ ವೀಕ್ಷಣವಲಯದಿಂದ ಜಗುಳಿಹೋಗುತ್ತದೆ. ಬೆಳಕಿನ ವೇಗವೂ ಕಕ್ಷಾವೇಗವೂ ಸೇರಿ ನಕ್ಷತ್ರದ ನೆಲೆ ವಿಚಲಿತವಾದಂತೆ ಕಾಣುವುದನ್ನು ಸರಿಪಡಿಸಲು ದೂರದರ್ಶನಕಕ್ಕೆ ಒದಗಿಸಬೇಕಾದ ತಿದ್ದುಪಡಿಯೇ ಈ ಕೋನ ಚಲನೆ. ಇದು ಬೆಳಕಿನ ವಿಪಥನವನ್ನು ಅಳೆಯುತ್ತದೆ.

	ಬೆಳಕಿನ ವಿಪಥನದ ಶೋಧನೆ ಹಾಗೂ ವಿವರಣೆ ನೀಡಿದವ ಬ್ರ್ಯಾಡ್ಲೇ. ಭೂಮಿಯ ಕಕ್ಷಾಚಲನೆಯನ್ನು ಇದು ವಿವಾದಾತೀತವಾಗಿ ಸ್ಥಿರೀಕರಿಸಿದ್ದಲ್ಲದೆ ಬೆಳಕಿನ ವೇಗವನ್ನು ತಾಳೆನೋಡಲು ಹೊಸತೊಂದು ನಿಷ್ಕøಷ್ಟ ವಿಧಾನವನ್ನೂ ಒದಗಿಸಿತು. ಬೆಳಕಿನ ವೇಗ ಸೆಕೆಂಡಿಗೆ 2,95,000 ಕಿಮೀ ಎಂದು ಬ್ರ್ಯಾಡ್ಲೇ ಮಂಡಿಸಿದ.

	ಬ್ರ್ಯಾಡ್ಲೇ ವಿಪಥನ ವಿದ್ಯಮಾನವನ್ನು ಶೋಧಿಸಿದ ನಿಜ. ಆದರೆ ದಿಗಂತರ ವಿದ್ಯಮಾನ ಇವನ ಗಮನಕ್ಕೆ ಬರಲಿಲ್ಲ. ಇದನ್ನು ಶೋಧಿಸಿದವ ಜರ್ಮನಿಯ ಖಗೋಳವಿಜ್ಞಾನಿ ಹಾಗೂ ಗಣಿತವಿದ ಫ್ರೀಡ್ರಿಕ್ ವಿಲ್‍ಹೆಲ್ಮ್ ಬೆಸೆಲ್ (1784-1846)
 
      ನಿಷ್ಕøಷ್ಟ ವೀಕ್ಷಕನಾಗಿದ್ದ ಬ್ರ್ಯಾಡ್ಲೇ ನಕ್ಷತ್ರಗಳಿಗೆ ಬೇರೆ ಒಂದು ಬಗೆಯ ತೋರ್ಕೆ ಚಲನೆ ಇರುವುದನ್ನೂ ಗಮನಿಸಿದ. ಭೂಮ್ಯಕ್ಷದ ಅತ್ಯಲ್ಪ ಕಂಪನದ ಪರಿಣಾಮವಾಗಿ ತಲೆದೋರುವ ಈ ಚಲನೆಗೆ ಅಕ್ಷಕಂಪನವೆಂದು (ನ್ಯೂಟೇಶನ್) ಹೆಸರು.       *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ